ಫ್ರಾಂಕ್‍ಫರ್ಟ್ 2 -

ಪೂರ್ವ ಜರ್ಮನಿಯ ಒಂದು ಜಿಲ್ಲೆ ಮತ್ತು ಜಿಲ್ಲಾ ಆಡಳಿತ ಕೇಂದ್ರ. ಈ ಕೈಗಾರಿಕಾನಗರವನ್ನು ಫ್ರಾಂಕ್‍ಫರ್ಟ್ ಆನ್ ಓಡರ್ ಎಂದೂ ಗುರುತಿಸುತ್ತಾರೆ. ಫ್ರಾಂಕ್‍ಫರ್ಟ್ ಜಿಲ್ಲೆಯ ವಿಸ್ತೀರ್ಣ 7,185 ಚ. ಕಿ.ಮೀ. ಜನಸಂಖೈ 6,84,442, (1970)

	ಫ್ರಾಂಕ್‍ಫರ್ಟ್ ನಗರ ಬರ್ಲಿನ್ನಿಗೆ ಆಗ್ನೇಯದಲ್ಲಿ 96 ಕಿಮೀ. ದೂರದಲ್ಲಿ ಜರ್ಮನಿ ಮತ್ತು ಪೋಲೆಂಡುಗಳ ಸರಹದ್ದಿನಲ್ಲಿ ಓಡರ್ ನದಿಯ ಎಡದಂಡೆಯ ಮೇಲಿದೆ. ಜನಸಂಖೈ 62,011 (1970).

	ಹಿಂದೆ ಈ ನಗರದ ಉಪನಗರವಾಗಿದ್ದ ಓಡರ್ ನದಿಯ ಬಲದಂಡೆಯ ಭಾಗವನ್ನು 1945ರಲ್ಲಿ ಫೋಲೆಂಡಿಗೆ ವರ್ಗಾಯಿಸಲಾಯಿತು. ಅದನ್ನು ಈಗ ಸ್ಲುಬೇಟ್ಸ್ ಎಂದು ಕರೆಯುತ್ತಾರೆ. ಫ್ರಾಂಕ್‍ಫರ್ಟ್ ಕೈಗಾರಿಕಾ ನಗರ ಹಾಗೂ ವಿದೇಶಿ ವ್ಯಾಪಾರ ಕೇಂದ್ರ. ಇಲ್ಲಿ ಯಂತ್ರಗಳು, ಪೀಠೋಪಕರಣ, ಆಹಾರ ವಸ್ತುಗಳು. ಬೂಟುಗಳು ಮತ್ತು ಹತ್ತಿಬಟ್ಟೆಗಳ ತಯಾರಿಕಾ ಉದ್ಯಮಗಳಿವೆ. ಈ ನಗರ ಬರ್ಲಿನ್-ವಾರ್ಸಾ-ಮಾಸ್ಕೊ ರೈಲುಮಾರ್ಗದಲ್ಲಿದೆ. ಇಲ್ಲಿ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿವೆ.

	ಇದು ಹದಿಮೂರನೆಯ ಶತಮಾನದಿಂದ ರಾಜಕೀಯ ಮಹತ್ತ್ವ ಪಡೆದಿದ್ದ ಸ್ಥಳ. 1506ರಲ್ಲಿ ಇಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲಾಯಿತು. ಅದು ಮಧೈ ಕೆಲವು ಕಾಲ ಸ್ಥಗಿತಗೊಂಡರೂ 1811ರ ತನಕವೂ ಅಸ್ತಿತ್ವದಲ್ಲಿತ್ತು. ಎರಡನೆಯ ಮಹಾಯದ್ಧದಲ್ಲಿ ಈ ನಗರ ಬಹಳಷ್ಟು ಹಾಳಾಯಿತಾದರೊ ಮತ್ತೆ ನಗರ ನಿರ್ಮಾಣವಾಯಿತು. ಇಲ್ಲಿ 15ನೆಯ ಶತಮಾನದ ಸೆಂಟ್ ಮೇರಿ ಇಗರ್ಜಿ, 1607-09ರ ವೇಳೆಯಲ್ಲಿ ಹೊಸರೂಪು ಕೊಟ್ಟು ಕಟ್ಟಿದ ನಗರಭವನ, ಸೆಂಟ್ ನಿಕೊಲಾಸ್ ಇಗರ್ಜಿ, ಕವಿ ಹೈನ್ರಿಕ್ ಫಾನ್ ಕ್ಲೈಸ್ಟ್‍ನ ನೆನಪಿನ ಗ್ರಂಥಾಲಯ ಮುಂತಾದವುಗಳಿವೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ